ಡಾ.ವಿಶ್ವನಾಥ ಕಾರ್ನಾಡ್,ಅವರು ಒಬ್ಬ ಹೆಸರಾಂತ ಸಾಹಿತಿ, ಸಂಶೋಧಕ, ಅನುವಾದಕ, ಸಂಘಟಕ, ಶಿಕ್ಷಕ, ನಾಟಕಕಾರ, ಸಮಾಜ ಸೇವಕ, ಪತ್ರಿಕೋದ್ಯಮಿಯಾಗಿ ಮುಂಬಯಿನ ನಾಗರಿಕರಿಗೆ ಪರಿಚಿತರಾಗಿದ್ದಾರೆ. ಮಹರ್ಷಿ ದಯಾನಂದ ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ಸುಮಾರು ೫ ದಶಕಗಳಿಂದ ಕನ್ನಡಮ್ಮನ ಪರಿಚಾರಕರಾಗಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಿರುವ ಮುಂಬಯಿ ಕನ್ನಡಿಗರಲ್ಲೊಬ್ಬರು. == ಜನನ, ವಿದ್ಯಾಭ್ಯಾಸ, ಮತ್ತು ವೃತ್ತಿಜೀವನ == ಕಡಂದಲೆಯ 'ಸಿಂಧು ಕೋಟ್ಯಾನ್' ಮತ್ತು ಮುಜಿಕ್ರ ಬಂಗೇರ ಮಾನಂ ಪಾಡಿ ಮುಲ್ಕಿ ದಂಪತಿಗಳ ೫ ಮಕ್ಕಳಲ್ಲಿ ಇವರು ಮೂರನೆಯವರು. 'ಸುಣ್ಣದ ಕಲಮನೆ'ಯಲ್ಲಿ ೧೯೪೦ ರ ಮಾರ್ಚ್ ೩ ರಂದು ಜನಿಸಿದರು. ಮುಲ್ಕಿಯ ಕೂಬೇವುರಿನ ಪ್ರಾಥಮಿಕ ಶಾಲೆಯಲ್ಲಿ ೪ ನೆಯ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ ತಮ್ಮ ಅಣ್ಣ , ರಮೇಶ್ ಜೊತೆ ಮುಂಬಯಿ ಮಹಾನಗರಕ್ಕೆ ಪಾದಾರ್ಪಣೆ ಮಾಡಿದರು. ಮುಂಬಯಿನ ಉಪನಗರ ವಿಲೇಪಾರ್ಲೆ(ಪೂ) ದಲ್ಲಿನ ಸುಂದರ್ ಹೋಟೆಲ್ ನಲ್ಲಿ ಕೆಲಸ ಮಾಡಿದರು. ಮುಂದೆ ಕೋಟೆಯ ಅಜ್ಗಾಂಕರ್ ಡಿಸ್ಪೆನ್ಸರಿಯಲ್ಲಿ ಕಾಂಪೌಂಡರ್ ಆಗಿ ಕೆಲಸಮಾಡಿದರು. ವಿಶ್ವನಾಥರಿಗೆ ಫುಟ್ಬಾಲ್ ಆಟದಲ್ಲಿ ಅತೀವ ಆಸಕ್ತಿ ಇತ್ತು. ಹತ್ತಿರದ ಕೋಟೆಯ ಕೊಪರೇಜ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯಗಳನ್ನು ಅವರು ವೀಕ್ಷಿಸುತ್ತಿದ್ದರು. ಆ ಮೈದಾನಕ್ಕೆ ಬರುತ್ತಿದ್ದ ಮದರ್ ಇಂಡಿಯ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಜೆರೋಮ್ ಲಿವಿಸ್ ರವರ ಪರಿಚಯವಾಯಿತು. ಲಿವಿಸ್ ರವರು ಕಾರ್ನಾಡರನ್ನು ತಮ್ಮ ಮದರ್ ಇಂಡಿಯ ಸ್ಕೂಲಿನ ರಾತ್ರಿಶಾಲೆಗೆ ದಾಖಲಿಸಿದರು. ಹೀಗೆಯೇ ಮುಂದುವರೆದು ಗೆಳೆಯರ ಸಹಾಯದಿಂದ 'ಆಗ್ಫಾ ಕಂಪೆನಿ'ಯಲ್ಲಿ ನೌಕರಿ ಗಳಿಸಿದರು. ಎಸ್. ಎಸ್. ಸಿಯ ನಂತರ, ಎಲ್. ಐ. ಸಿ. ಕಂಪೆನಿಯಲ್ಲಿ ಕ್ಲರ್ಕ್ ಆಗಿ ನಿಯುಕ್ತರಾಗಿ ಸುಮಾರು ೬ ವರ್ಷ ಕೆಲಸಮಾಡಿದರು. ವಿದ್ಯಾಭ್ಯಾಸದಲ್ಲಿ ಅವರಿಗೆ ಬಹಳ ಆಸಕ್ತಿಯಿತ್ತು. ಮುಂದೆ ಜೈಹಿಂದ್ ಕಾಲೇಜ್ ನಲ್ಲಿ ಅಧ್ಯಯನ ಮುಂದುವರೆಸಿ, ಬಿ.ಎ ಪದವಿಯನ್ನು ಗಳಿಸಿದರು. ಇದಾದ ಬಳಿಕ ಮುಂದೆ ಮಾಟುಂಗಾ ಜಿಲ್ಲೆಯಲ್ಲಿದ್ದ ರೂಪಾರೆಲ್ ಕಾಲೇಜ್ ನಲ್ಲಿ ಎಮ್.ಎ.(ಕನ್ನಡ) ಮತ್ತು ಇಂಗ್ಲೀಷಿನಲ್ಲಿ ಇತಿಹಾಸದಲ್ಲಿ ಎಮ್.ಎ.ಪದವಿ ಗಳಿಸಿದರು. ೧೯೯೬ ರಲ್ಲಿ ಪರೇಲ್ ನ ಎಮ್.ಡಿ. ಕಾಲೇಜ್ ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇರಿದರು. ೧೯೬೭ ರ ಡಿಸೆಂಬರ್ ೨೪ ರಂದು, ನಳಿನಿಯವರ ಜೊತೆ ವಿವಾಹಮಾಡಿಕೊಂಡರು. ಮದುವೆಯ ನಂತರ, ಕೆ.ಸಿ.ಕಾಲೇಜ್ ನಿಂದ ಎಲ್.ಎಲ್.ಬಿ ಪದವಿ ಗಳಿಸಿದರು. ಗವರ್ನಮೆಂಟ್ ಎಸ್.ಟಿ. ಕಾಲೇಜಿನಿಂದ ಬಿ.ಎಡ್.ಪದವಿಯನ್ನೂ ಮತ್ತು ಹಿಂದಿ ಭಾಷೆಯಲ್ಲಿ "ಭಾಷಾ ರತ್ನ ಪದವಿ" ಯನ್ನೂ ಪಡೆದುಕೊಂಡರು. ಹೀಗೆ ಪ್ರಾಧ್ಯಾಪಕರಾಗಿರುವಾಗಲೇ ೨೮ ದಿನ ಬೆಂಗಳೂರಿನಲ್ಲಿ ವಿಜಯ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದರು. == ಸಾಹಿತ್ಯ ಕೃಷಿ == ವಿಶ್ವನಾಥರು, ಕನ್ನಡ ಭಾಷೆಯಲ್ಲಿ ಕತೆ, ಕಾದಂಬರಿ, ಸಣ್ಣ ಕತೆ, ಕವಿತೆ, ವಿಮರ್ಶೆ, ನಾಟಕ, ಪ್ರಬಂಧಗಳಲ್ಲಿ ಕೃಷಿಮಾಡಿದ್ದಾರೆ. 'ಪ್ರಯೋಗ ಎಂಬ ಪ್ರಯೋಗಾತ್ಮಕ ಕತೆಗಳ ವಾರ್ಷಿಕ ಸಂಚಿಕೆ'ಯನ್ನು ಮುಂಬಯಿನ ಕನ್ನಡಿಗರಿಗೆ ಸಂಪಾದಿಸಿಕೊಟ್ಟು ಸಹಕರಿಸಿದರು. ವಿಶ್ವನಾಥರು ಒಬ್ಬ ಸಮರ್ಥ ಅನುವಾದಕ, ಸಂಶೋಧಕ,ಸಂಘಟಕ, ನಾಟಕಕಾರ, ಸಮಾಜ ಸೇವಕ, ಪತ್ರಿಕೋದ್ಯಮಿ, ಎಮ್.ಡಿ. ಕಾಲೇಜ್ ನಲ್ಲಿ ೩೦ ವರ್ಷ ಶಿಕ್ಷಕರಾಗಿದ್ದರು. ವಿದ್ಯಾವಿಹಾರ್ ನ ಸೋಮಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಬಹುಕಾಲ ಕೆಲಸಮಾಡುತ್ತಿದ್ದ ಅವರ ಪ್ರೀತಿಯ ಪತ್ನಿ, ನಳಿನ ಕಾರ್ನಾಡ್, ೨೦೧೦ ರ ಆಗಸ್ಟ್ ೨೯ ರಂದು ಹೃದಯಾಘಾತದಿಂದ ಮರಣಿಸಿದರು. ಈ ದಂಪತಿಗಳಿಗೆ, ಡಾ ಪಲ್ಲವಿ,ಸತೀಶ್, ಸನಿಲ್, ಶರತ್, ರೋಹಿತ್ ಮಕ್ಕಳು. == ಪಿ.ಎಚ್.ಡಿ. ಪ್ರಬಂಧ == 'ತುಳುವರ ಮುಂಬಯಿ ವಲಸೆ -ಸಾಂಸ್ಕೃತಿಕ ಅಧ್ಯಯನ ಪಿ.ಎಚ್.ಡಿ.ಪ್ರಬಂಧ ಪ್ರಗತಿಪರ ಧೋರಣೆಯ ಮನಸ್ಸಿನ ಮುಕ್ತ ಚಿಂತನ ಮಂಥನ ಮನೋಧಾರಣೆಯಾಗಿದೆ. == ಹಲವು ಮಂಡಲಿಗಳ ಪದಾಧಿಕಾರಿಯಾಗಿ == ಕನ್ನಡ ಪಠ್ಯ ಪುಸ್ತಕಗಳ ಮಂಡಳಿಯ ಸದಸ್ಯ ಪದವಿಯೇತರ ವಿದ್ಯಾರ್ಥಿಗಳ ಶಿಕ್ಷಕ ವಿವಿಧ ವಿಶ್ವ ವಿದ್ಯಾಲಯಗಳ ಪರೀಕ್ಷಕ ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಸದಸ್ಯತ್ವ ಕರ್ನಾಟಕ ಜಾನಪದ ಯಕ್ಷಗಾನ ಅಕ್ಯಾಡೆಮಿ ಸದಸ್ಯತ್ವ ಕರ್ನಾಟಕ ಸಾಹಿತ್ಯ ಪರಿಷತ್ತು ಸದಸ್ಯತ್ವ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಸದಸ್ಯತ್ವ ಸಾಹಿತ್ಯ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದರು. ಮೈಸೂರು ದಸರಾ ಕವಿ ಸಮ್ಮೇಳನಗಳಲ್ಲಿ ಭಾಗವಹಿಸಿ ಸನ್ಮಾನಿತರಾಗಿದ್ದಾರೆ. == ಅನುವಾದ == 'ನರ್ತಕಿ ನಾಟಕ' ವನ್ನು ಕನ್ನಡಕ್ಕೆ ಅನುವಾದಿಸಿದರು. ಚೋಮನ ದುಡಿ, ಸತ್ಯವತಿ, ಅಪರಾಧಿ ಯಾರು, ಮೊದಲಾದ ನಾಟಕಗಳನ್ನೂ ನಿರ್ದೇಶಿಸಿ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. == ಪ್ರಶಸ್ತಿಗಳು == 'ಗುರುನಾರಾಯಣ ಪ್ರಶಸ್ತಿ ವಿಜೇತರು'. ’ಯಾಜ್ಞ ಸೇನಿ’ (ಕಾದಂಬರಿ ವಿಭಾಗ) ಕೃತಿ,'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ'ಗೆ ಆಯ್ಕೆಯಾಗಿದೆ. 'ಸಾಧನ ಶಿಖರ ಪ್ರಶಸ್ತಿ'(೨೦೧೪) == 'ಡಾ.ವಿಶ್ವನಾಥ್ ಕಾರ್ನಾಡರ, ಅಭಿನಂದನಾ ಗ್ರಂಥದ ಬಿಡುಗಡೆ ಸಮಾರಂಭ' == ೭೪ ವರ್ಷದ ವಿಶ್ವನಾಥರ ಅಭಿಮಾನಿಗಳು, ಸ್ನೇಹಿತರು, ಮತ್ತು ವಿದ್ಯಾರ್ಥಿಗಳು 'ಅವರ ಅಬಿನಂದನಾ ಗ್ರಂಥ, 'ಸಮಾಲೋಕ ಗ್ರಂಥ' ದ ಬಿಡುಗಡೆ ಸಮಾರಂಭ' ನಂತರ ಸಾಹಿತ್ಯ ಗೋಷ್ಟಿ ಕಾರ್ಯಕ್ರಮವನ್ನು ೨೦೧೩ ರ, ಸೆಪ್ಟೆಂಬರ್ ೨೨ ರ ರವಿವಾರದ ಸಂಜೆ, ಮುಂಬಯಿನ ಡಾ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದರು. == ೨೦೧೭ == ಡಾ.ವಿಶ್ವನಾಥ ಕಾರ್ನಾಡರ ಬಗ್ಗೆ, ಡಾ.ಭರತ್ ಕುಮಾರ್ ಪೊಲಿಪು ರವರು ಬರೆದ ಪುಸ್ತಕವನ್ನು, ೨೮,ಜನವರಿ, ೨೦೧೭ ರಂದು, ಮೈಸೂರ್ ಅಸೋಸಿಯೇಷನ್, ಮುಂಬಯಿ ನ ಸಭಾಗೃಹದಲ್ಲಿ ಬಿಡುಗಡೆಮಾಡಲಾಯಿತು. == ೨೦೧೯ == ಡಾ. ವಿಶ್ವನಾಥ ಕಾರ್ನಾಡರು ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಸಾಂತಾಕ್ರುಝ್ ನ ಜೆ.ಪಿ.ನಾಯಕ್ ಹಾಲ್ ನಲ್ಲಿ ಉಪನ್ಯಾಸವನ್ನು ನೀಡಿದರು. ಆ ಸಮಯದಲ್ಲಿ ಅವರ ೪ ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮವಿತ್ತು. == ಡಾ.ವಿಶ್ವನಾಥ್ ಕಾರ್ನಾಡ್ ಪ್ರತಿಷ್ಠಾನ ಸ್ಥಾಪನೆ == ವರ್ಷ ೨೦೨೨ ರ ಡಿಸೆಂಬರ್, ೨೪ ರಂದು ಮುಂಬಯಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಡಾ.ಕಾಳೇಗೌಡ ನಾಗವಾರರವರಿಂದ ಉದ್ಘಾಟನೆ ಮಾಡಲಾಯಿತು. , == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==